View this in:
English Devanagari Telugu Tamil Kannada Malayalam Gujarati Odia Bengali  |
Marathi Assamese Punjabi Hindi Samskritam Konkani Nepali Sinhala Grantha  |
This document is in ಸರಳ ಕನ್ನಡ with simplified anusvaras. View this in ಶುದ್ಧ ಕನ್ನಡ, with correct anusvaras marked.

ಕೇಶವ ನಾಮ

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷ ರಾಶಿ ನಾಶ ಮಾಡು ಶ್ರೀಶ ಕೇಶವ

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ॥1॥

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವ ॥ 2॥

ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದನೆ ॥3॥

ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ॥4॥

ಮೊದಲು ನಿನ್ನ ಪಾದ ಪೂಜೆ ಮುದದಿ ಗೈವೆನಯ್ಯ ನಾನು
ಹೃದಯದೊಳಗೆ ಒದಗಿಸಯ್ಯ ಮಧುಸೂದನ ॥5॥

ಕವಿದುಕೊಂಡು ಇರುವ ಪಾಪ ಸವೆದು ಹೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸೊ ಘನ ತ್ರಿವಿಕ್ರಮ ॥6॥

ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ॥7॥

ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಇರುವ ಹಾಗೆ ಹೃದಯದಲ್ಲಿ ಸದನ ಮಾಡು ಮುದದಿ ಶ್ರೀಧರ ॥8॥

ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು
ಹುಸಿಗೆ ನನ್ನ ಹಾಕದಿರೋ ಹೃಷಿಕೇಶನೆ ॥9॥

ಅಬ್ಧಿಯೊಳಗೆ ಬಿದ್ದು ನಾನು ಒದ್ದುಕೊಂಬೆನಯ್ಯ ಭವದಿ
ಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ॥10॥

ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸು ಶ್ರೀಮಹಾನುಭಾವನಾದ ದಾಮೋದರ ॥11॥

ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನ
ಕಿಂಕರನ್ನ ಮಾಡಿಕೊಳ್ಳೊ ಸಂಕರುಷಣ ॥12॥

ಏಸು ಜನ್ಮ ಬಂದರೇನು ದಾಸನಲ್ಲವೇನೊ ನಿನ್ನ
ಘಾಸಿ ಮಾಡದಿರೋ ಎನ್ನ ವಾಸುದೇವನೆ ॥13॥

ಬುದ್ಧಿ ಶೂನ್ಯನಾಗಿ ನಾನು ಕದ್ದ ಕಳ್ಳನಾದೆನಯ್ಯ
ತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೆ ॥14॥

ಜನನಿ ಜನಕ ನೀನೆ ಎಂದು ಎನುವೆನಯ್ಯ ದೀನಬಂಧು
ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ॥15॥

ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮ
ಇರಿಸು ಚರಣದಲ್ಲಿ ಕ್ಷೇಮ ಪುರುಷೋತ್ತಮ ॥16॥

ಸಾಧು ಸಂಗ ಕೊಟ್ಟು ನಿನ್ನ ಪಾದಭಜಕನೆನಿಸು ಎನ್ನ
ಭೇದ ಮಾಡಿ ನೋಡದಿರೋ ಅಧೋಕ್ಷಜ ॥17॥

ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿ ಇರುವೆ ನಿನಗೆ ನಾರಸಿಂಹನೆ ॥18॥

ಸಂಚಿತಾರ್ಥ ಪಾಪಗಳನು ಕಿಂಚಿತಾದರುಳಿಯದಂತೆ
ಮುಂಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ ॥19॥

ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ
ಹೀನ ಬುದ್ಧಿ ಬಿಡಿಸೊ ಮುನ್ನ ಜನಾರ್ದನ ॥20॥

ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲ
ತಪ್ಪ ಕೋಟಿ ಕ್ಷಮಿಸಬೇಕು ಉಪೇಂದ್ರನೆ ॥21॥

ಮೊರೆಯನಿಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆ
ಇರಿಸು ಭಕ್ತರೊಳಗೆ ಪರಮಪುರುಷ ಶ್ರೀಹರೇ ॥22॥

ಪುಟ್ಟಿಸಲೇ ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ ॥23॥

ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರ
ಅರ್ತಿಯಿಂದ ಕಾಯದಿರನು ಕರ್ತೃ ಕೇಶವ ॥24॥

ಮರೆತು ಬಿಡದೆ ಹರಿಯ ನಾಮ ಬರೆದು ಓದಿ ಕೇಳುವರಿಗೆ
ಕರೆದು ಮುಕ್ತಿ ಕೊಡುವ ಬಾಡದಾದಿಕೇಶವ ॥25॥




Browse Related Categories: